ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ
ಚಿಂತೆ ಬಿಡಿ ಹೂವ ಮುಡಿದಂತೆ

ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ
ಜೀವದಲಿ ಜಾತ್ರೆ ಮುಗಿದಂತೆ

ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು
ಮೂಗುತಿಯ ಮಿಂಚು ಒಳಹೊರಗೆ
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು
ಬೇಲಿಯಲಿ ಹಾವು ಹರಿದಂತೆ

ಮೊರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ
ಹೂವಿಗೂ ಜೀವ ಬಂದಂತೆ
ಸಂಜೆಯಲಿ ರಾತ್ರಿ ಇಳಿದಂತೆ ಬೀಳುಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ

- ಕೆ. ಎಸ್. ನರಸಿಂಹಸ್ವಾಮಿಯವರು.