ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ
ಮುಡಿದ ಮಲ್ಲಿಗೆ ಅರಳು ಬಾಡಿಲ್ಲ ರಾಯರೆ
ತವರಿನಲಿ ತಾಯಿ ನಗುತಿಹಳು
ಕುಡಿದ ನೀರು ಅನುಗಿಲ್ಲ ಕೊರಗದಿರಿ ರಾಯರೆ
ಅಮ್ಮನಿಗೆ ಬಳೆಯಾ ತೊಡಿಸಿದರು
ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ ಸದ್ದು ತುಂಬಿತ್ತು
ಬಳೆಯ ತೊಡಿಸಿದರಂದು ಅಮ್ಮನಿಗೆ ತವರಿನಲಿ
ಅಂಗಳದ ತುಂಬ ಜನರಿತ್ತು
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ
ಸೆರಗಿನಲಿ ಕಣ್ಣೀರನೊರೆಸಿ
ಸುಖದಲ್ಲಿ ನಿಮ್ಮ ನೆನೆದರು ತಾಯಿ ಕುಲವಂತೆ
ದೀಪದಲಿ ಬಿರುಗಣ್ಣನಿರಿಸಿ
ಬೇಕಾದ ಹಣ್ನಿಹುದು, ಹೂವಿಹುದು ತವರಿನಲಿ
ಹೊಸ ಸೀರೆ ರತ್ನದಾಭಾರಣ
ತಾಯಿ ಕೊರಗುವರಲ್ಲಿ ನೀವಿಲ್ಲ ಊರಿನಲಿ
ನಿಮಗಿಲ್ಲ ಒಂದು ಹನಿ ಕರುಣ
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
ದಿನವಾದ ಬಸುರಿ ಹುಸ್ಸೆಂದು ಹಿಗ್ಗುಸಿರೆಳೆದು
ಹುದಿಯ ಬಾರದು ನನ್ನ ದೊರೆಯೆ
ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು
ಒಣಗಬಾರದು ಒಡಳ ಚಿಲುಮೆ
ಉಳಿಸು ಮಾವನ ಮೇಲೆ ಮಗಳೇನ ಮಾಡಿದಳು
ನಿಮಗೇತಕೀ ಕಲ್ಲು ಮನಸು
ಹೋಗಿ ಬನ್ನಿರಿ ಒಮ್ಮೆ ಕೈ ಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು
ಅಮ್ಮನಿಗೆ ನಿಮ್ಮದೇ ಕನಸು...
ಅಮ್ಮನಿಗೆ ನಿಮ್ಮದೇ ಕನಸು....
- ಕೆ. ಎಸ್. ನರಸಿಂಹಸ್ವಾಮಿಯವರು.
0 Comments