ಮಿಕ್ಕವರಲಿ ನಗೆ ಕೂಡುತ ಬೆರೆವೆ
ನನ್ನೊಂದಿಗೆ ಬರಿ ಗೋಳನೆ ಕರೆವೆ
ಒಲವೋ ಹಗೆಯೋ ಯಾವುದಿದು
ಹೆರರೇನನ್ನಲಿ ಕೇಳುತ ನಲಿವೆ
ಸರಸವನ್ನಾಡಲು ನನ್ನಲಿ ಮುನಿವೆ
ಒಲವೋ ಹಗೆಯೋ ಯಾವುದಿದು
ಕುಳಿತರೆ ನಿಂತರೆ ಹುಳುಕನೆ ಬಗೆವೆ
ತುಸು ತಪ್ಪಾದರು ಕಲಹವ ತೆಗೆವೆ
ಒಲವೋ ಹಗೆಯೋ ಯಾವುದಿದು
ಪ್ರಣಯವ ಬೀರಲು ಕಪಟವಿದೆನುವೆ
ಸುಮ್ಮನೆ ಸಾರಲು ಒಲವಿಲ್ಲೆನ್ನುವೆ
ಒಲವೋ ಹಗೆಯೋ ಯಾವುದಿದು
ದೂರಿದೆನಲ್ಲವೆ ನಿನ್ನನು ಹೆಚ್ಚು
ನನಗಾದರೊ ಈ ಹಗೆಯು ಮೆಚ್ಚು
ಒಲವೋ ಹುಚ್ಚೋ ಯಾವುದಿದು
-ತೀ.ನಂ.ಶ್ರೀಕಂಠಯ್ಯ
0 Comments