ಹೆಚ್ಚು ಮಾತನಾಡುವುದರಿಂದ ಯಾರೂ ಬುದ್ಧಿವಂತರಾಗುವುದಿಲ್ಲ. ಯಾರು ಶಾಂತಿ ಶೀಲರೋ ಸ್ನೇಹ ಜೀವಿಗಳೋ, ನಿರ್ಭಯರೋ ಅವರೇ ಬುದ್ಧಿಶಾಲಿಗಳು.
ಮಾಡುವ ಕೆಲಸದಲ್ಲಿ ಉದ್ರೇಕ ತಲೆದೋರದಂತೆ ಯಾವಾಗಲೂ ಎಚ್ಚರವಹಿಸಬೇಕು.
ಅಲ್ಪ ಸುಖವನ್ನು ತ್ಯಜಿಸುವುದರಿಂದ ಮಹತ್ತರ ಸುಖವನ್ನು ಪಡೆಯಬಹುದು.
ಹಾಲು ಕರೆದಕೂಡಲೇ ಹೇಗೆ ಹುಳಿಯಾಗುವುದಿಲ್ಲವೋ ಹಾಗೆಯೇ ಒಂದು ಕೆಟ್ಟ ಕೆಲಸಮಾಡಿದ ಕೂಡಲೇ ಅದರ ಪರಣಾಮ ಗೊತ್ತಾಗುವುದಿಲ್ಲ. ಆದರೆ ಅದು ಒಳಗೇ ಹೊಗೆಯಾಡುತ್ತಿದ್ದು ಅನುಸರಿಸಿಕೊಂಡು ಬರುತ್ತದೆ; ಕಣ್ಣಿಗೆ ಕಾಣದ ಬೂದಿ ಮುಚ್ಚಿದ ಕೆಂಡದಂತೆ.
ಕೆಟ್ಟಕೆಲಸಕ್ಕೆ ಕೈಹಾಕದಿರುವುದೇ ಒಳ್ಳೆಯದು. ಏಕೆಂದರೆ ಅದರಿಂದ ಆಮೇಲೆ ದುಃಖ ಒದಗುತ್ತದೆ. ಒಳ್ಳೆಯ ಕೆಲಸವನ್ನು ಮಾಡುವುದೇ ಉತ್ತಮ. ಏಕೆಂದರೆ ಅದರಿಂದ ಆಮೇಲೆ ದುಃಖ ಒದಗುವುದಿಲ್ಲ.
ಈ ಪ್ರಪಂಚದಲ್ಲಿ ಒಳ್ಳೆಯದೆಂದರೆ ತಾಯಿಯ ಸೇವೆ; ಒಳ್ಳೆಯದೆಂದರೆ ತಂದೆ ಸೇವೆ.
ಮನಸ್ಸನ್ನು ಗೆಲ್ಲುವುದು ಅದ್ಭುತವಾದ ಕೆಲಸ. ಏಕೆಂದರೆ ಅದನ್ನು ನಿಗ್ರಹಿಸುವುದು ತುಂಬ ಕಷ್ಟ. ಅದರ ಗತಿ ಬಹು ಚಪಲ; ಅದು ತನಗೆ ಬೇಕಾದ್ದನ್ನೆಲ್ಲಾ ಹಿಡಿದುಕೊಳ್ಳುತ್ತದೆ. ಆದರೆ ಪಳಗಿಸಿದ ಮನಸ್ಸಿನಿಂದ ಸುಖ ಲಭಿಸುತ್ತದೆ.
ಸುಳ್ಳು, ನಿಂದೆ, ಒಣಹರಟೆ, ದುರಾಸೆ ಇವುಗಳಿಂದ ದೂರ ಇರಬೇಕು.
ಈ ಪ್ರಪಂಚದಲ್ಲಿ ನಾಲ್ಕು ವಿಧವಾದ ಜನರಿದ್ದಾರೆ; ಕತ್ತಲೆಯ ಕಡೆಗೆ ನಡೆಯುವರು. ಬೆಳಕಿನ ಕಡೆಗೆ ನಡೆಯುವರು. ಕತ್ತಲೆಯ ಕಡೆಗೆ ನಡೆಯುವ ಬೆಳಕಿನ ಜನರು. ಬೆಳಕಿನ ಕಡೆಗೆ ನಡೆಯುವ ಕತ್ತಲೆಯ ಜನರು.
ಸತ್ಯಹೇಳು, ಕೋಪಿಸಿಕೊಳ್ಳಬೇಡ ಬೇಡಿದವರಿಗೆ ಸ್ವಲ್ಪವಾದರೂ ದಾನಮಾಡು, ಈ ಮೂರು ದಾರಿಯಿಂದ ನೀನು ದೇವತೆ ಹತ್ತಿರ ಹೋಗಬಹುದು.
ತುಕ್ಕು ಕಬ್ಬಣದಲ್ಲಿ ಹುಟ್ಟುತ್ತದೆ, ಅದನ್ನೇ ತಿನ್ನುತ್ತದೆ. ಅದರಂತೆ ಪಾಪ ಮಾಡಿದವನ ಪಾಪ ಆ ಪಾಪಿಯನ್ನೇ ತಿಂದು ಬಿಡುತ್ತವೆ.
ಯಾರಿಗೂ ತೊಂದರೆ ಮಾಡದೆ, ಸಾಧ್ಯವಾದಷ್ಟು ಮಟ್ಟಿಗೂ ಒಳ್ಳೆಯದನ್ನೇ ಮಾಡುತ್ತ, ಎಲ್ಲ ಕೆಲಸದಲ್ಲಿಯೂ ಪ್ರೇಮ, ದಯೆ, ಸತ್ಯನಿಷ್ಠ ಮತ್ತು ಚಿತ್ತಶುದ್ಧಿಗಳನ್ನು ಆಚರಣೆಗೆ ತರಬೇಕು, ಇದೇ ಧರ್ಮದ ತಿರುಳು.
ಸರ್ವತ್ಯಾಗಿಯಾದವನಿಗೆ ಈ ಸೃಷ್ಟಿಯಲ್ಲಿ ಎಲ್ಲಿ ಹೇಗೆ ಸಂಚರಿಸಿದರೂ ಆಸೆ-ಅಂಜಿಕೆಗಳ ಕಾಟವಿಲ್ಲ.
ಯಾವ ರೀತಿಯ ಪಾಪವನ್ನೂ ಮಾಡದೆ ಇರುವುದು, ಯಾವಾಗಲೂ ಪುಣ್ಯವನ್ನು ಸಂಪಾದಿಸುವುದು, ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದು ಇದೇ ಬುದ್ಧರ ಶಾಸನ.
0 Comments